My Podcast Site

ಮಧುರ ನೆನಪು

ತುಳು ಚಿತ್ರಗೀತೆಗಳ ಸಾರ ಸಂಗ್ರಹ " ಇದ್ ಇಲಂಗ ವಾನುಲಿ ವರ್ತಗ ಒಲಿಪರಪ್ಪು. ಇಪ್ಪುಡುದು ನೇರಂ ಎರಂಡ್ ಮಣಿ. ಎರಂಡ್ ಮುಪ್ಪದ್ ವರೈ ಕನ್ನಡ ಪಾಡಲ್. ಮೊದಲಾವದಾಕ ದಾರೆದ ಬುಡೆದಿ ಎಂದ ಪಡತ್ತಿಲ್ ಪಿ.ಬಿ.ಶ್ರೀನಿವಾಸ್ ಪಾಡಿಯ ಪಾಟ್ ". ಮುಂದೆ ಅಲೆ ಅಲೆಯಾಗಿ ತೇಲಿ ಬಂತು "ನಿಕ್ಕಾದೆ ಯಾನ್ ದುಂಬಿಯಾದ್ ಬರ್ಪೆ..." ಇದು 1972 ರ ಒಂದು ಮಧ್ಯಾಹ್ನ ರೇಡಿಯೊ ಸಿಲೋನ್ ನ ಕನ್ನಡ ಕಾರ್ಯಕ್ರಮದಲ್ಲಿ ತಮಿಳು ಉದ್ಘೋಷಣೆಯೊಂದಿಗೆ ಪ್ರಸಾರವಾದ ಮೊತ್ತ ಮೊದಲ ತುಳು ಚಿತ್ರಗೀತೆ. ತುಳು ಸಿನೆಮಾ ತಯಾರಾಗುತ್ತಾ ಇದೆ, H M V ಯ H.M. ಮಹೇಶ್ ಪ್ರಯತ್ನದಿಂದ ರೇಡಿಯೊ ಸಿಲೋನ್ ನಲ್ಲಿ ಇದರ ಹಾಡುಗಳು ಬಿತ್ತರಗೊಳ್ಳಲಿವೆ ಎಂದು ಪೇಪರ್ ನಲ್ಲಿ ಓದಿ ಗೊತ್ತಿತ್ತು. ಆದರೆ ಹಾಡುಗಳು ಯಾವ ರೀತಿ ಇರಬಹುದೆಂಬ ಕಲ್ಪನೆ ಇರಲಿಲ್ಲ. ಸಾಮಾನ್ಯವಾಗಿ ತುಳು ನಾಟಕಗಳಲ್ಲಿ ಅಳವಡಿಸಲಾಗುತ್ತಿದ್ದಂತೆ ಹಿಂದಿ ಟ್ಯೂನ್ ಆಧಾರಿತ ಹಾಡುಗಳು ಇರಬಹುದೆಂದು ಅಂದುಕೊಂಡಿದ್ದ ನಮಗೆ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಪಿ.ಬಿ.ಎಸ್, ಜಾನಕಿ ಮುಂತಾದವರ ಧ್ವನಿಯಲ್ಲಿ ತುಳು ಹಾಡುಗಳನ್ನು ಕೇಳಿದಾಗ ಥ್ರಿಲ್ ಎನಿಸಿತ್ತು. ಮುಂದೆ ಬಿಡುಗಡೆಗೊಂಡ ಇನ್ನೂ ಹಲವು ತುಳು ಚಿತ್ರಗಳ ಹಾಡುಗಳನ್ನು ಕೇಳಲು ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಸಮಾರಂಭಗಳಲ್ಲಿ ಅಳವಡಿಸುತ್ತಿದ್ದ ಧ್ವನಿ ವರ್ಧಕಗಳನ್ನು ಬಿಟ್ಟರೆ ಬಹಳಷ್ಟು ವರ್ಷ ರೇಡಿಯೊ ಸಿಲೋನ್ ಒಂದೇ ಆಸರೆಯಾಗಿತ್ತು. ಮುಂದೆ ಮಂಗಳೂರು ಆಕಾಶವಾಣಿ ಜನ್ಮ ತಾಳಿದ ಮೇಲೆ ಹೆಚ್ಚು ಹೆಚ್ಚು ತುಳು ಗೀತೆಗಳು ಕೇಳಿಬರತೊಡಗಿದವಾದರೂ ವರುಷಗಳು ಸಂದಂತೆ ರೇಡಿಯೊ ಸಿಲೋನ್ ಹಿನ್ನೆಲೆಗೆ ಸರಿಯುತ್ತಾ ಬಂತು, ಗಾನ ತಟ್ಟೆಗಳು ಅಟ್ಟ ಸೇರಿದವು, ತುಳು ಹಾಡುಗಳು ಮತ್ತೆ ಅಪರೂಪವಾಗತೊಡಗಿದವು. ಈಗಲೂ "ಎಕ್ಕ ಸಕ", "ಮೋಕೆ ದ ಸಿಂಗಾರಿ" ಮುಂತಾದ ಹಾಡುಗಳು ರೇಡಿಯೋದಲ್ಲೋ, ಆರ್ಕೆಷ್ಟ್ರಾಗಳಲ್ಲೊ ಅಥವಾ remix ರೂಪದಲ್ಲೊ ಆಗೊಮ್ಮೆ ಈಗೊಮ್ಮೆ ಕಿವಿಗೆ ಬೀಳುವುದುಂಟು. ಆದರೆ ಬಹುತೇಕ original ಹಾಡುಗಳು ಜನಮಾನಸದಿಂದ ಮರೆಯಾಗಿವೆ. ಈಗ ವಿಶೇಷ ಪ್ರಯತ್ನದಿಂದ 1970-80 ರ ದಶಕದ ಸುಮಾರು 12 ಚಿತ್ರಗಳ ಹಾಡುಗಳ ಸಾರವನ್ನು ವಿಶಿಷ್ಟ ರೂಪದಲ್ಲಿ ಪ್ರಸ್ತುತ ಪಡಿಸಿದ್ದೇನೆ. ಆಲಿಸಿ, ಹಳೆಯ ನೆನಪುಗಳನ್ನು ಮಲುಕು ಹಾಕಿ, ಈ ಪ್ರಯತ್ನ ನಿಮಗೆ ಹೇಗನ್ನಿಸಿತು ಎಂದು ತಿಳಿಸಿ. [youtube=//www.youtube.com/watch?v=o_Ch83F29ZE]

Copyright 2014 Chidambar Kakathkar. All rights reserved.

Podcast Powered By Podbean

Version: 20240320